ಕೀನ್ಷಾಸ

ಕಾಂಗೋ ಪ್ರಜಾಸತ್ತಾತ್ಮಕ ಗಣರಾಜ್ಯದ ರಾಜಧಾನಿ: ಕಿನ್ಷಾಸ ಪ್ರಾಂತ್ಯದ ಆಡಳಿತಕೇಂದ್ರ. ಕಾಂಗೋ ನದಿಯ ಎಡದಂಡೆಯ ಮೇಲೆ-ಅದರ ದಕ್ಷಿಣ ಪಾಶ್ರ್ವದಲ್ಲಿ -ಸ್ಟಾನ್ಲಿ ಮಡುವಿನ ಮುಖಬಾಗದಲ್ಲಿ- ಹಬ್ಬಿದೆ. ಕಾಂಗೋ ನದಿಯ ಎದುರು ದಂಡೆಯ ಮೇಲೆ ಇರುವುದು ಬ್ರ್ಯಾಜóವಿಲೆ-ಕಾಂಗೋ ಗಣ ರಾಜ್ಯದ ರಾಜಧಾನಿ. ಹಿಂದೆ ಕೀನ್ಷಾಸಕ್ಕೆ ಲೀಯೊಪೋಲ್ಡ್‍ವಿಲ್ ಎಂಬ ಹೆಸರಿತ್ತು. 13 ವಿಭಾಗಗಳನ್ನೂ ಒಂದು ಹೊರವಲಯವನ್ನೂ ಒಳಗೊಂಡ ಈ ನಗರದ ಜನಸಂಖ್ಯೆ 1958ರಲ್ಲಿ 3,89,547 ಇತ್ತು. 1967ರಲ್ಲಿ ಇದರ ಜನಸಂಖ್ಯೆ ಸುಮಾರು 15,00,000 ಆಗಿತ್ತು.

 ಕೀನ್ಷಾಸ ಆಫ್ರಿಕದ ಸಮಭಾಜಕೀಯ ಪ್ರದೇಶದ ನಗರಗಳಲ್ಲೆಲ್ಲ ವಿಶಿಷ್ಟವಾದ್ದು. ಕಾಂಗೋ ರಾಜ್ಯ ಸ್ವಾತಂತ್ರಗಳಿಸುವುದಕ್ಕೆ ಹಿಂದೆ ಅಲ್ಲಿ ಅಧಿಕ ಸಂಖ್ಯೆಯಲ್ಲಿ ವಾಸವಾಗಿದ್ದ ಐರೋಪ್ಯರು ಸ್ವಾತಂತ್ರ್ಯಸಮರ ಕಾಲದಲ್ಲಿ ನಗರವನ್ನು ತ್ಯಜಿಸಿ ಹೋಗಿದ್ದರೂ ಅವರ ಸಂಖ್ಯೆ ಈಗ ಹಿಂದಿನಂತೆಯೇ ತಕ್ಕಮಟ್ಟಿಗಿದೆ. ಭವ್ಯ ಕಟ್ಟಡಗಳಿಂದ ಕೂಡಿದ ಐರೋಪ್ಯ ಬಡಾವಣೆ ಇರುವುದು ಕಾಂಗೋ ನದಿಯ ದಂಡೆಯ ಮೇಲೆ, ಕಲಿನಾ ಪಾಯಿಂಟ್ ಎಂಬ ಸ್ಥಳಕ್ಕೆ ಪೂರ್ವದಲ್ಲಿ. ಈ ಭಾಗ ವಿಶಾಲವಾದ ರಸ್ತೆಗಳಿಂದಲೂ ಚೌಕಗಳಿಂದಲೂ ಉದ್ಯಾನಗಳಿಂದಲೂ ಕೂಡಿ ಆಕರ್ಷಕವಾಗಿದೆ. ಸರ್ಕಾರಿ ಕಚೇರಿಗಳು, ವಿದ್ಯಾಸಂಸ್ಥೆಗಳು ಮತ್ತು ಹಡಗುರವಾನೆ ಕಂಪನಿಗಳು ಆಧುನಿಕ ರೀತಿಯಲ್ಲಿ ವ್ಯವಸ್ಥೆಗೊಂಡಿವೆ. ಕಾಂಗೋ ಜನರ ವಸತಿಗಳಿರುವುದು ನಗರದ ಮಧ್ಯಭಾಗದಲ್ಲಿ-ದಟ್ಟವಾಗಿ ಹರಡಿರುವ ವೃಕ್ಷಗಳ ನಡುವೆ.

 ಕೀನ್ಷಾಸ ಕಾಂಗೋರಾಜ್ಯದ ಮುಖ್ಯವಾಣಿಜ್ಯ ಕೇಂದ್ರ. ಕೀನ್ಷಾಸದ ಬಂದರು ಐರೋಪ್ಯರ ಬಡಾವಣೆಯ ಎದುರಿಗೆ ನದೀ ದಂಡೆಯನ್ನು ಆವರಿಸಿ ಕೊಂಡಿದೆ. ಅಲ್ಲಿಂದ ನದಿಯ ಪ್ರವಾಹಕ್ಕೆ ಇದಿರಾಗಿ, 1,000 ಮೈಲಿಗಳಷ್ಟು ದೂರದಲ್ಲಿರುವ ಕೀಸಾಂಗಾನಿಯ ವರಿಗೆ ನೌಕಾಸಂಚಾರ ಸಾಧ್ಯ. ಕಾಂಗೋ ನದೀಮಾರ್ಗದಲ್ಲಿ ಕೀನ್ಷಾಸ ನಗರವೇ ಪಶ್ಚಿಮದ ತುದಿ. ಅಲ್ಲಿಂದ ಮುಂದೆ, ನೈಋತ್ಯದಲ್ಲಿ 160 ಮೈಲಿ ದೂರದಲ್ಲಿರುವ ಮಟಾಡಿ ರೇವಿಗೆ ಸಮುದ್ರ ನೌಕೆಗಳು ಕಾಂಗೋ ನದಿಯ ಮೂಲಕ ಬರುತ್ತವೆ. ಕೀನ್ಷಾಸ ನಗರಕ್ಕೂ ಮಟಾಡಿಗೂ ನಡುವೆ 1898ರಲ್ಲಿ ರಚನೆಯಾದ ರೈಲುಮಾರ್ಗವಿದೆ. ಈ ಭಾಗದಲ್ಲಿ ಕಾಂಗೋನದಿಯ ವೇಗ ಅಧಿಕವಾಗಿದ್ದು ಅನೇಕ ಜಲಪಾತಗಳಿರುವುದರಿಂದ ಇಲ್ಲಿ ನೌಕಾಯಾನ ಸಾಧ್ಯವಿಲ್ಲ.

 ಕೀನ್ಷಾಸ ನಗರದಿಂದ ತೆಂಗಿನಕಾಯಿ, ಚೌಬೀನೆ, ಕಾಫಿ, ತವರ, ರಬ್ಬರ್, ದಂತ, ಸಕ್ಕರೆ ಮೊದಲಾದವು ರಫ್ತಾಗುತ್ತವೆ. ನಗರದಲ್ಲಿ ಹಲವು ಜವಳಿ ಗಿರಣಿಗಳಿವೆ. ಬಂದರಿನ ಬಳಿ ವನಸ್ಪತಿ ಎಣ್ಣೆ ಹಾಗೂ ಪೆಟ್ರೋಲ್ ದಾಸ್ತಾನು ಸ್ಥಳಗಳುಂಟು. ಕಾಂಗೋ ನದಿಯಲ್ಲಿ ಸಂಚರಿಸುವ ಹಡಗುಗಳ ಉಪಯೋಗಕ್ಕಾಗಿ ಮಟಾಡಿ-ಕೀನ್ಷಾಸ ನಗರಗಳ ನಡುವೆ ನದಿಯ ಅಂಚಿನಲ್ಲೇ ಪೆಟ್ರೋಲಿಯಂ ಎಣ್ಣೆಯ ಕೊಳವೆಯನ್ನು ಹಾಕಿದ್ದಾರೆ. ಅಂತರರಾಷ್ಟ್ರೀಯ ಹಾಗೂ ಅಂತರ್ದೇಶೀಯ ಸಂಚಾರ ಸೌಕರ್ಯಕ್ಕಾಗಿ ಏರ್ಪಟ್ಟಿರುವ ವಿಮಾನ ನಿಲ್ದಾಣ ಈ ನಗರದ ಪೂರ್ವ ದಿಕ್ಕಿನಲ್ಲಿದೆ.

 ಬೆಲ್ಜಿಯಂ ರಾಜ್ಯದ ಪರವಾಗಿ ಆಫ್ರಿಕದಲ್ಲಿ ವಸಾಹತುಗಳನ್ನು ಸ್ಥಾಪಿಸಲು ಎಚ್.ಎಂ ಸ್ಟ್ಯಾನ್‍ಲಿ 1887ರಲ್ಲಿ ಆಗಮಿಸಿದಾಗ ಇಲ್ಲಿ ಕೀನ್ಷಾಸ ಮತ್ತು ಕಿಂಟಾಂಬೊ ಎಂಬ ಎರಡು ಹಳ್ಳಿಗಳಿದ್ದುವು. ಕಿಂಟಾಂಬೊದಲ್ಲಿ ಆತ ಒಂದು ಕೋಠಿ ಸ್ಥಾಪಿಸಿ, ಈ ಸ್ಥಳವನ್ನೂ ತನ್ನ ದೊರೆಯಾದ 2ನೆಯ ಲೀಯೊಪೋಲ್ಡ್ ನ ಹೆಸರಿನಲ್ಲಿ ಲೀಯೊಪೋಲ್ಡ್ವಿಲ್  ಎಂದು ಕರೆದ. 1880ರ ದಶಕದಲ್ಲಿ ಇಲ್ಲಿ ಅನೇಕ ಕ್ರೈಸ್ತ ಮಿಷನ್ ಗಳೂ ವ್ಯವಹಾರ ಸಂಸ್ಥೆಗಳೂ ಸ್ಥಾಪಿತವಾದುವು. ಬೆಲ್ಜಿಯಂ ಕಾಂಗೋದ ರಾಜಧಾನಿಯನ್ನು ಬೋಮದಿಂದ ಇಲ್ಲಿಗೆ 1929ರಲ್ಲಿ ಬದಲಾಯಿಸಲಾಯಿತು. 1960ರಲ್ಲಿ ಇದು ನೂತನ ಗಣರಾಜ್ಯದ ರಾಜಧಾನಿಯಾಯಿತು.

 ಕೀನ್ವಾಸ ಪ್ರಾಂತ್ಯ: ಕಾಂಗೋ ಪ್ರಜಾಸತ್ತಾತ್ಮಕ ಗಣರಾಜ್ಯದ ಪಶ್ಚಿಮತಮ ಪ್ರಾಂತ್ಯ. ಇದಕ್ಕೆ ಕಿರಿದಾದ ಅಟ್ಲಾಂಟಿಕ್ ಸಾಗರತೀರವುಂಟು. ಪ್ರಾಂತ್ಯದ ವಿಸ್ತೀರ್ಣ 1,38,862 ಚ. ಮೈ.; ಜನಸಂಖ್ಯೆ ಸು. 33,01,140 (1967). ಈ ಪ್ರಾಂತ್ಯದಲ್ಲಿ ಹರಿಯುವ ಕಾಂಗೋ ನದಿಯ ಪೂರ್ವಕ್ಕೆ ಕ್ವಾಂಗೋ ಮತ್ತು ಕ್ವೀಲೂ ಪ್ರಸ್ಥಬೂಮಿಗಳಿವೆ. ಲೇಯೋಪೋಲ್ಡ್ ಸರೋವರದ ಸುತ್ತ ದಟ್ಟವಾದ ಸಮಭಾಜಕೀಯ ಕಾಡುಗಳುಂಟು. ಪಶ್ಚಮದ ಬಾಸ್-ಕಾಂಗೋದಲ್ಲಿ ವರ್ಷಕ್ಕೆ ನಾಲ್ಕೈದು ತಿಂಗಳುಗಳ ಕಾಲ ಒಣಹವೆ ಇರುತ್ತದೆ; ಅಟ್ಲಾಂಟಿಕದ ಚಳಿಗಾಳಿ ಬೀಸುವುದರಿಂದ ಆಗ ಹವಾ ಬಹಳ ತಣ್ಣಗಿರುತ್ತದೆ.

 ಕೀನ್ಷಾಸ ಪ್ರಾಂತ್ಯದ ಬಾಸ್-ಕಾಂಗೋ ಮತ್ತು ಮಯೂಂಬೆ ಪ್ರದೇಶಗಳಲ್ಲಿ ಜನಸಾಂದ್ರತೆ ಹೆಚ್ಚು. ಕೀನ್ಷಾಸ ನಗರ ಈ ಪ್ರಾಂತ್ಯದ ಆಡಳಿತ ಕೇಂದ್ರ. ಮಟಾಡಿ ಮತ್ತು ಬೋಮ-ಇವು ಈ ರೇವುಪಟ್ಟಣಗಳು. ಜಾಂಗೋದಲ್ಲಿ ಜಲವಿದ್ಯುತ್ ಕೇಂದ್ರವಿದೆ. 1962ರಲ್ಲಿ ಕೀನ್ಷಾಸ ಪ್ರಾಂತ್ಯವನ್ನು ಕಾಂಗೋ-ಮಧ್ಯ, ಕ್ವಾಂಗೋ, ಕ್ವೀಲೂ ಮತ್ತು ಮೈ-ನ್ಡೋಂಬೆ ಎಂದು ವಿಭಾಗಿಸಲಾಯಿತು.

 

(ವಿ.ಜಿ.ಕೆ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ